ಅಪಹರಣ	
	
ಬಲಾತ್ಕಾರದಿಂದ ಅಥವಾ ವಂಚನೆಯಿಂದ ವ್ಯಕ್ತಿಗಳನ್ನು ಸ್ವಾಧೀನಮಾಡಿಕೊಳ್ಳುವುದು (ಅಬ್ಜಕ್ಷನ್). ಇಲ್ಲಿ ಸ್ತ್ರೀಅಪಹರಣವನ್ನು ಕುರಿತು ಬರೆಯಲಾಗಿದೆ. ಪ್ರಾಕ್ತನ ವಿವಾಹ ಸಂಪ್ರದಾಯಗಳಲ್ಲೂ ಇತರೆಡೆಗಳಲ್ಲೂ ಅಪಹರಣ ರೂಢವಾಗಿದೆ. ಇದನ್ನೆ ಮನು ರಾಕ್ಷಸ ವಿವಾಹ ಎಂದಿರುವುದು. ಅವನು ಉಲ್ಲೇಖಿಸಿರುವ ವಿವಾಹದ ಎಂಟು ಬಗೆಗಳಲ್ಲಿ ರಾಕ್ಷಸ ವಿವಾಹವೂ ಒಂದು. ಬಬ್ರುವಿನ ಪತ್ನಿಯನ್ನು ಶಿಶುಪಾಲನೂ ವಿಚಿತ್ರವೀರ್ಯನ ಸಲುವಾಗಿ ಅಂಬೆ, ಅಂಬಿಕೆ ಮತ್ತು ಅಂಬಾಳಿಕೆಯರನ್ನು ಭೀಷ್ಮನೂ ಅಪಹರಿಸಿದರು. ಕನ್ಯೆಯರನ್ನು ವೇಶ್ಯಾ ವೃತ್ತಿಯಲ್ಲಿ ತೊಡಗಿಸುವುದಕ್ಕೂ ಅವರನ್ನು ಮಾರುವುದಕ್ಕೂ ಅಪಹರಣ ಮಾಡುವ ಕ್ರಮಗಳುಂಟು.
	
ನಾಗರಿಕ ಪ್ರಪಂಚದಲ್ಲಿ ವಿವಾಹಕ್ಕಾಗಿ ಕನ್ಯಾಪಹರಣ ಮಾಡುವ ಪದ್ಧತಿ ಕಾನೂನು ಬಾಹಿರವಾದರೂ ಒಂದು ಕಾಲದಲ್ಲಿ ಕಾನೂನುಬದ್ಧವಾಗಿತ್ತು. ಈ ಪದ್ಧತಿ ಈಗಲೂ ಕೆಲವು ಅನಾಗರಿಕ ಜನಾಂಗಗಳ ಬುಡಕಟ್ಟಿನಲ್ಲಿ ಸಂಪ್ರದಾಯಬದ್ಧವಾಗಿರುವುದನ್ನು ನೋಡಬಹುದು. ಉದಾಹರಣೆಗೆ ಉತ್ತರ ಏಷ್ಯದ ಕಾಲ್ಮಕ್, ಸಾವೊಯೊಡ್ ಪೈಕಗಳಲ್ಲೂ ಆಫ್ರಿಕ, ಏಷ್ಯ ಮುಂತಾದ ಕಡೆಗಳಲ್ಲಿನ ಆದಿವಾಸಿಗಳಲ್ಲಿ (ಭಾರತದಲ್ಲಿ-ಮುಳ್ಳುಕುರುಬರು, ತಿರುವಾಂಕೂರಿನ ಮುಡುವರು, ಉತ್ತರ ಆರ್ಕಾಟಿನ ಮಲಯಾಳಿಗಳು, ಛೋಟಾನಾಗಪುರ ಹಾಗೂ ವೈನಾಡಿನ ಆದಿವಾಸಿಗಳು) ವಧುವಿನ ಕಡೆಯ ಗಂಡಸರು ಅಥವಾ ಹೆಂಗಸರೊಡನೆ ಹೊಡೆದಾಡಿ ವಧುವನ್ನು ಅಪಹರಿಸಿ ವಶಮಾಡಿಕೊಳ್ಳುವ ವಿವಾಹಸಂಪ್ರದಾಯವಿದೆ.
	
ಸಯಾಮಿನ ಕರೇನರಲ್ಲಿ ವರ ತನ್ನ ಶಕ್ತಿ ಸಾಮಥ್ರ್ಯವನ್ನು ಪ್ರದರ್ಶಿಸಲು ವಧುವಿನ ಕಡೆಯವರೊಡನೆ ಹೊಡೆದಾಡಬೇಕು. ಲಿಂಗನಿಷೇಧದ (ಸೆಕ್ಸ್ ಟ್ಯಾಬೂ) ಗಂಡಾಂತರವನ್ನು ದೂರಮಾಡಲು ಹೆಣ್ಣು ನಾಚಬೇಕು; ಗಂಡು ಬಲಾತ್ಕರಿಸಬೇಕು ಎಂಬ ಕಲ್ಪನೆ ಆದಿವಾಸಿಗಳಲ್ಲಿ ಇರುವಂತಿದೆ. ಲಗ್ನ ನಿಶ್ಚಯವಾದ ಮೇಲೆ ವಧು ಅಡಗಿರಬೇಕು. ವರನಾಗಲಿ ಹೆಂಗಸರಾಗಲಿ ಅವಳನ್ನು ಒತ್ತಾಯದಿಂದ ಒಪ್ಪಿಸಬೇಕು ಎಂಬ ಪದ್ಧತಿಗಳು ಸಿನಾಯ್ ಮರುಭೂಮಿಯ ಬಿಡುಯಿನರಲ್ಲೂ ಐಸ್‍ಲೆಂಡ್‍ದವರಲ್ಲೂ ಉಂಟು. ಕನ್ಯೆ ನೀರಿಗೆ ಹೋಗುವಾಗ, ಕಟ್ಟಿಗೆಯನ್ನು ತರುವಾಗ ಇಲ್ಲವೆ ನೃತ್ಯ ಕೂಟದಲ್ಲಿ ಭಾಗವಹಿಸುವಾಗ, ಅಪಹರಿಸಿ ವಿವಾಹವಾಗುವ ಪದ್ಧತಿ ಅನೇಕ ಆದಿವಾಸಿಗಳಲ್ಲಿದೆ.
	
ಹೆಣ್ಣು ಬೆದೆಗೆ ಬರುವ ಮೊದಲೂ ಗಂಡು ಬಲಾತ್ಕಾರಮಾಡುವುದು ಪ್ರಾಣಿಗಳಲ್ಲಿ ಸಹಜ. ಈ ಭೂಮಿಕೆಯೇ ಅಪಹರಣವಿಧಿಯ ಮೂಲವಾಗಿರಬೇಕು.
	
ಜಗತ್ತಿನ ಜಾನಪದಕಥೆಗಳಲ್ಲಿ ಅಸಂಖ್ಯ ಅಪಹರಣಕಥೆಗಳುಂಟು. ದೇವತೆಗಳು, ರಾಕ್ಷಸರು, ಭೂತಗಳು, ಕುಳ್ಳರು, ಜಲದೇವತೆಗಳು, ಪ್ರಾಣಿಗಳು, ದುಷ್ಟರಾಜ ಕುಮಾರರು ಹಾಗೂ ಇತರರು ಸುಂದರಿಯರನ್ನು ಅಪಹರಿಸಿಕೊಂಡು ಹೋಗುವ ಕಥೆಗಳುಂಟು; ಮಾಟದ ಶಕ್ತಿಯಿಂದ ಮಾಟದ ಮನೆಗಳಿಗೆ ಅಪಹರಿಸಿಕೊಂಡು ಹೋಗುವ ಕಥೆಗಳೂ ಉಂಟು. ಜ್ಯೂಸ್ ದೇವತೆ ಎತ್ತಿನ ರೂಪದಿಂದ ಯುರೋಪಾಳನ್ನು ಅಪಹರಿಸಿದ ಪ್ರಸಿದ್ಧ ಗ್ರೀಕ್ ಪುರಾಣಕಥೆಯಿದೆ. ಬಯ್ಯುವ ಗಯ್ಯಾಳಿಯ ಜೊತೆಗೆ ಬಡ್ಡಿ ವ್ಯಾಪಾರಿಯನ್ನೂ ಇತರ ದುಷ್ಟರನ್ನೂ ಅಪಹರಿಸಿಕೊಂಡು ಹೋಗುವ ಜಾನಪದಕಥೆಗಳೂ ಉಂಟು.          

(ಎಲ್.ಆರ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ